ತ್ಯಾಗಿ, ಮಹಾವೀರ

	ಸ್ವಾತಂತ್ರ್ಯ ಹೋರಾಟಗಾರ, ಪ್ರಮುಖ ರಾಜಕಾರಣಿ. ಇವರು ಜನಿಸಿದ್ದು ಉತ್ತರ ಪ್ರದೇಶದ ಮೊರಾದಾಬಾದ್ ಜಿಲ್ಲೆಯ ಧಬಾರ್ಸಿ ಗ್ರಾಮದಲ್ಲಿ 1899 ರ ಡಿಸೆಂಬರ್ 31 ರಂದು. ತಾಯಿ ಜಾನಕಿ ದೇವಿ, ತಂದೆ ಶಿವನಾಥ ಸಿಂಗ್, ಬ್ರಾಹ್ಮಣರಾದರೂ ಬೇಸಾಯ ಅವರ ಕಸಬಾಗಿತ್ತು. ತಮ್ಮ ಹಳ್ಳಿಯಲ್ಲಿಯೇ ಪ್ರಾಥಮಿಕ ಶಿಕ್ಷಣ ಪೂರೈಸಿ ಅನಂತರ ಮೀರತ್‍ನ ನಾನಕಚಂದ್ ಪ್ರೌಢಶಾಲೆಯಲ್ಲಿ ವಿದ್ಯಾಭ್ಯಾಸ ಮುಗಿಸಿದರು. 1925ರ ಜುಲೈ 26 ರಂದು ಶರ್ಮದಾ ದೇವಿಯವರನ್ನು ವಿವಾಹವಾದರು. 1938 ರಲ್ಲಿ ಪತ್ನಿ ತೀರಿಕೊಂಡರು. ಅವರು ಮತ್ತೆ ಮದುವೆ ಆಗಲಿಲ್ಲ.

ತ್ಯಾಗಿಯವರು ಭಾರತೀಯ ಸೈನ್ಯ ಸೇರಿ ಒಂದನೆಯ ಮಹಾಯುದ್ಧದಲ್ಲಿ ಇರಾನಿನಲ್ಲಿ ಸೈನಿಕ ಕಾರ್ಯಾಚರಣೆಗಳಲ್ಲಿ ಭಾಗವಹಿಸಿದರು. ಮಹಾಯುದ್ಧದ ತರುವಾಯ ಭಾರತಕ್ಕೆ ಹಿಂದಿರುಗಿದ ಮೇಲೆ ಮಹಾತ್ಮ ಗಾಂಧಿಯವರ ಪ್ರಭಾವಕ್ಕೆ ಒಳಗಾದರು. ಸರ್ಕಾರ ಅವರನ್ನು ಸೈನ್ಯದಿಂದ ಉಚ್ಛಾಟಿಸಿತು. ತ್ಯಾಗಿಯವರು ಭಾರತ ಸ್ವಾತಂತ್ರ್ಯ ಚಳವಳಿಯಲ್ಲಿ ಸಕ್ರಿಯವಾಗಿ ಪಾತ್ರ ವಹಿಸತೊಡಗಿದರು. ಡೆಹರಾ ಡೂನ್‍ನಿಂದ ಮೀರತ್ ಪಟ್ಟಣದ ವರೆಗೂ ಹಳ್ಳಿ ಹಳ್ಳಿ ಸಂಚರಿಸಿ, ಓಣಿಗಳಲ್ಲಿ ತುತ್ತೂರಿ ಊದಿ, ಜನ ಸೇರಿದ ಮೇಲೆ ಭಾಷಣಮಾಡಿ ಅವರನ್ನು ತಮ್ಮ ಕಡೆಗೆ ಆಕರ್ಷಿಸಿಕೊಳ್ಳುತ್ತಿದ್ದರು. ಅವರು 1927 ರಿಂದಲೂ ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಸದಸ್ಯರಾಗಿದ್ದರು. ತ್ಯಾಗಿಯವರು ಸುಮಾರು ಹನ್ನೊಂದು ಬಾರಿ ಕಾರಾಗೃಹ ಸೇರಿದರು. ಪಕ್ಷದ ಸಂಘಟನೆಗಾಗಿ, ಪಕ್ಷಕ್ಕಾಗಿ ಹಣ ಕೂಡಿಸಲು ಹಾಗೂ ಚುನಾವಣೆಗಳಲ್ಲಿ ಕಾಂಗ್ರೆಸ್ಸಿಗೆ ಯಶಸ್ಸು ದೊರಕಿಸಿ ಕೊಡಲು ಉತ್ತರ ಪ್ರದೇಶದಲ್ಲಿ ಅವರು ವಿಶೇಷವಾಗಿ ದುಡಿದರು. 1947-48ರ ಕೋಮು ಗಲಭೆಗಳ ಸಂದರ್ಭದಲ್ಲಿ ಶಾಂತಿ ಪಾಲನೆಗೆ ಅವರು ಸ್ವಯಂಸೇವಕ ತಂಡವೊಂದನ್ನು ಸಂಘಟಿಸಿದರು.

1937 ರಲ್ಲಿ ಅವರು ಸಂಯುಕ್ತ ಪ್ರಾಂತ್ಯದ (ಉತ್ತರ ಪ್ರದೇಶ) ವಿಧಾನಸಭೆಗೆ ಆಯ್ಕೆಗೊಂಡರು. 1947 ರಲ್ಲಿ ಭಾರತ ಸಂವಿಧಾನ ಸಭೆಯ ಸದಸ್ಯರಾದರು. 1951 ರಲ್ಲಿ ಕಂದಾಯ ಹಾಗೂ ಖರ್ಚು ಶಾಖೆಯ ಮಂತ್ರಿಯಾದರು. 1953-1957 ರಲ್ಲಿ ರಕ್ಷಣಾ ವ್ಯವಸ್ಥೆಯ ಮಂತ್ರಿಯೂ 1957-1959 ರಲ್ಲಿ ಪ್ರತ್ಯಕ್ಷ ತೆರಿಗೆ ಆಡಳಿತ ವಿಚಾರಣಾ ಸಮಿತಿಯ ಅಧ್ಯಕ್ಷರೂ 1962-1964 ರಲ್ಲಿ ಸಾರ್ವನಿಕ ಲೆಕ್ಕ ಸಮಿತಿಯ ಅಧ್ಯಕ್ಷರೂ ಆಮೇಲೆ ಸಂಪುಟದರ್ಜೆಯ ಪುನರ್‍ವಸತಿ ಶಾಖೆಯ ಮಂತ್ರಿಯೂ ಆಗಿದ್ದರು. ತಾಷ್ಕೆಂಟ್ ಒಪ್ಪಂದವನ್ನು ವಿರೋಧಿಸಿ 1966ರ ಜನವರಿ 15 ರಂದು ಮಂತ್ರಿಪದವಿಗೆ ರಾಜೀನಾಮೆ ನೀಡಿದರು. 1967 ರಲ್ಲಿ ಅಂಚೆ ಮತ್ತು ತಂತಿ ಇಲಾಖೆಯ ದರಗಳ ಸಮಿತಿಯ ಅಧ್ಯಕ್ಷರಾಗಿಯೂ 1968-1969 ರಲ್ಲಿ ಐದನೆಯ ಹಣಕಾಸು ಆಯೋಗದ ಅಧ್ಯಕ್ಷರಾಗಿಯೂ ಇದ್ದರು. 1969 ರಲ್ಲಿ ಕಾಂಗ್ರೆಸ್ ಪಕ್ಷ ಇಬ್ಬಾಗವಾದಾಗ ಸಂಸ್ಥಾ ಕಾಂಗ್ರೆಸ್ಸಿನ ಸದಸ್ಯರಾಗಿ ಉಳಿದರು. 1970 ರಲ್ಲಿ ರಾಜ್ಯಸಭೆಯ ಸದಸ್ಯರಾಗಿ ಆಯ್ಕೆಯಾಗಿದ್ದರು.								(ಎ.ಎಂ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ